ರಾಚಮಲ್ಲ 1

ದಕ್ಷಿಣ ಭಾರತದ ಪ್ರಸಿದ್ಧ ರಾಜಮನೆತನವಾದ ತಲಕಾಡು ಗಂಗವಂಶದ ದೊರೆ (ಸು. 816-43). ವಿಜಯಾದಿತ್ಯನ ಮಗ. ಇವನು ರಾಜನಾದ ತರುಣದಲ್ಲಿಯೇ ಬಾಣರಾಜ ವಿದ್ಯಾಧರ ಗಂಗವಾಡಿ 36000 ಪ್ರಾಂತ್ಯದ ಬಹುಭಾಗವನ್ನು ಆಕ್ರಮಿಸಿಕೊಂಡಿದ್ದ ರಾಷ್ಟ್ರಕೂಟ ಅಮೋಘವರ್ಷನೂ ರಾಚಮಲ್ಲನನ್ನು ಸೋಲಿಸಲು ತಕ್ಕ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದ. ಇವೆಲ್ಲವನ್ನೂ ಗಮನಿಸುತ್ತಿದ್ದ ರಾಚಮಲ್ಲ ತನ್ನ ಸಾಮಂತರೊಡನೆ ಸಖ್ಯವನ್ನು ಬೆಳೆಸಿ ತನ್ನ ಶಕ್ತಿಯನ್ನು ಹೆಚ್ಚಿಸಿಕೊಂಡ. ನೊಳಂಬ ಸಿಂಹಪೋತನ ಸಖ್ಯವನ್ನು ಸಂಪಾದಿಸುವ ದೃಷ್ಟಿಯಿಂದ ತನ್ನ ಮಗಳಾದ ಜಾಯಬ್ಬೆಯನ್ನು ನೊಳಂಬಾಧಿರಾಜ ಪೊಳಲ್ಚೋರನಿಗೆ ಲಗ್ನ ಮಾಡಿಕೊಟ್ಟುದು ಮಾತ್ರವಲ್ಲದೇ, ತಾನೇ ಸಿಂಹಪೋತನ ಮೊಮ್ಮಗಳನ್ನು ಮದುವೆಯಾದ. ರಾಚಮಲ್ಲ ಸ್ವತಂತ್ರನಾಗಲು ಹವಣಿಸುತ್ತಿರುವುದನ್ನು ನೋಡಿದ ರಾಷ್ಟ್ರಕೂಟ ಅಮೋಘವರ್ಷ ತನ್ನ ಪ್ರಸಿದ್ಧ ಸೇನಾನಿ ಬಂಕೆಯನ ನೇತೃತ್ವದಲ್ಲಿ ಸೈನ್ಯವೊಂದನ್ನು ಗಂಗರಾಜನ ಮೇಲೆ ಕಳುಹಿಸಿದ. ಬಂಕೆಯ ಕೈದಾಳವರ್ಗವನ್ನು ವಶಪಡಿಸಿಕೊಂಡು ಗಂಗಸೈನ್ಯವನ್ನು ಕಾವೇರಿಯವರೆಗೂ ಅಟ್ಟಿಸಿಕೊಂಡು ಹೋದ. ಇಷ್ಟರಲ್ಲಿಯೇ ರಾಷ್ಟ್ರಕೂಟ ರಾಜ್ಯದಲ್ಲಿ ಪರಿಸ್ಥಿತಿ ಹದಗೆಟ್ಟಿದ್ದರಿಂದ ಅವನು ಹಿಂದಿರುಗಬೇಕಾಯಿತು. ಇದರಿಂದ ಉತ್ತೇಜಿತನಾದ ರಾಚಮಲ್ಲ ಗಂಗವಾಡಿಯ ಬಹುಭಾಗಗಳನ್ನು ಆಕ್ರಮಿಸಿಕೊಂಡ. ಆದರೂ ಗಂಗವಾಡಿ ಪೂರ್ಣವಾಗಿ ಇವನ ಕೈ ಸೇರಲಿಲ್ಲ. ತಾತ್ಕಾಲಿಕವಾಗಿಯೂ ರಾಷ್ಟ್ರಕೂಟರಿಂದ ಗಂಗರಾಜ್ಯವನ್ನು ಬಿಡಿಸಿಕೊಂಡ ಕೀರ್ತಿ ರಾಚಮಲ್ಲನಿಗೆ ಸಲ್ಲುತ್ತದೆ.			

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ